ನಟ ಚೇತನ್‌ನ್ನ ಹಿಗ್ಗಾಮುಗ್ಗಾ ಝಾಡಿಸಿದ ನಟ ರಕ್ಷಿತ್ ಶೆಟ್ಟಿ: ಕಾರಣವೇನು ಗೊತ್ತಾ?

 

ನಟ, ಹೋರಾಟಗಾರ ಚೇತನ್ ಅವರ ಲೇಖನವೊಂದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ ಕನ್ನಡ ಚಿತ್ರರಂಗದ ಮತ್ತೋರ್ವ ನಟ ರಕ್ಷಿತ್ ಶೆಟ್ಟಿ ‘ಕೆಟ್ಟ ಸುಳ್ಳುಗಳಿಂದ ಕೆಡುಕನ್ನು ಬಿತ್ತುತ್ತಿರುವ ನಿಮ್ಮ ಮನಸ್ಸನ್ನು ಪರಿಶುದ್ಧಗೊಳಿಸಬೇಕಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟ ಚೇತನ್ ಅವರು ಬರೆದ ಜಾತಿ ಬಗೆಗಿನ ಬರಹವೊಂದನ್ನು ಪತ್ರಕರ್ತ ಸುದಿಪ್ತೋ ಮೊಂಡಲ್ ಅವರು ಟ್ವೀಟ್ ಮಾಡಿ, ‘ದಕ್ಷಿಣ ಭಾರತದ ಅತೀ ಕೆಟ್ಟ ಚಲನಚಿತ್ರೋದ್ಯಮದಲ್ಲಿ ಅಂತಿಮವಾಗಿ ಸ್ವಲ್ಪ ಭರವಸೆ ಮೂಡಿದೆ. ಕನ್ನಡ ಸಿನೆಮಾ ಎಂದು ಕರೆಯಲ್ಪಡುವ ಈ ಒಣ ಭೂಮಿಯಲ್ಲಿ ಚೇತನ್ ಅಹಿಂಸಾ ಹೆಚ್ಚು ಅಗತ್ಯವಿರುವ ಮಳೆಗಾಲ’ ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನಟ ಚೇತನ್, ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದಕ್ಕೆ ಧನ್ಯವಾದಗಳು. ನಾನು ಸಮಾನತೆಯ ಪತ್ರಿಕೋದ್ಯಮವನ್ನು ಗೌರವಿಸುತ್ತೇನೆ. ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ನಾವು ಈ ಹಿಂದೆ ಅನೇಕ ಉತ್ತಮ ಚಲನಚಿತ್ರಗಳನ್ನು ಮಾಡಿದ್ದೇವೆ. ಪ್ರಸಕ್ತ ಇತರ ಚಿತ್ರರಂಗಳಂತೆ ವಿಷಯ ಮತ್ತು ರಚನಾತ್ಮಕ ಸುಧಾರಣೆಗಳ ವಿಷಯದಲ್ಲಿ ವಿಕಸನಗೊಳ್ಳುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ಈ ಲೇಖನಕ್ಕೆ ನಟ ರಕ್ಷಿತ್ ಶೆಟ್ಟಿ ಕೂಡಾ ಪ್ರತಿಕ್ರಿಯೆ ನೀಡಿದ್ದು, ‘ದಕ್ಷಿಣದ ಭಾರತದಲ್ಲಿ ಕನ್ನಡ ಚಿತ್ರರಂಗ ನನಗೆ ಮತ್ತು ಇನ್ನೂ ಅನೇಕರಿಗೆ ಪ್ರತಿಭೆ ವ್ಯಕ್ತಪಡಿಸಲು ವೇದಿಕೆಯನ್ನು ನೀಡಿದೆ. ನನಗಿಂತ ಮೊದಲು ಅನೇಕ ದಂತಕಥೆಗಳನ್ನು ಈ ಚಿತ್ರರಂಗ ನಿರ್ಮಿಸಿದೆ. ಅದರ ಬಗ್ಗೆ ನಿಮಗೆ ತಿಳಿದಿಲ್ಲವೆಂದು ನನಗೆ ಖಾತ್ರಿಯಿದೆ. ಏನೂ ಅಲ್ಲದಿದ್ದ ನನ್ನ ಜೀವನವನ್ನು ಚಿತ್ರರಂಗ ಇಂದು ಇಲ್ಲಿ ತನಕ ಬೆಳೆಸಿದೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಚಿತ್ರರಂಗವೇ ಜೀವನ ಎಂದು ಬರೆದಿದ್ದಾರೆ.

ಜೊತೆಗೆ, ಗೌರವಾನ್ವಿತ ಚೇತನ್ ಅಹಿಂಸಾ ಅವರ ಕಾರ್ಯಗಳಿಗಾಗಿ ನಮಗೆ ಮೆಚ್ಚುಗೆಯಿದೆ. ಆದರೆ ಸರ್, ಕೆಟ್ಟ ಸುಳ್ಳುಗಳಿಂದ ಕೆಡುಕನ್ನು ಬಿತ್ತುತ್ತಿರುವ ನಿಮ್ಮ ಮನಸ್ಸನ್ನು ಪರಿಶುದ್ಧಗೊಳಿಸಬೇಕಾಗಿದೆ. ಶುಭಕಾಂಕ್ಷೆಗಳೊಂದಿಗೆ’ ಎಂದು ನಟ ರಕ್ಷಿತ್ ಶೆಟ್ಟಿ ಕಮೆಂಟ್ ಮಾಡಿದ್ದಾರೆ.