ಅಸಿಸ್ಟೆಂಟ್ ಸ್ಟಂಟ್ ಮಾಸ್ಟರ್ ಆಗಿ ಕನ್ನಡ ಚಿತ್ರರಂಗಕ್ಕೆ ಅಚಾನಕ್ ಎಂಟ್ರಿ ಕೊಟ್ಟ ರವಿವರ್ಮಾಗೆ ಇಂಡಿಪೆಂಡೆಂಟ್ ಸ್ಟಂಟ್ ಮಾಸ್ಟರ್ ಆಗಿ ಬ್ರೇಕ್ ನೀಡಿದ್ದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಧರ್ಮ ಸಿನಿಮಾ.
2004ರಲ್ಲಿ ತೆರೆ ಕಂಡ ಈ ಸಿನಿಮಾ ರವಿವರ್ಮಾ ಬದುಕಿನ ದಿಕ್ಕನ್ನೇ ಬದಲಿಸಿತ್ತು. ದರ್ಶನ್ರಿಂದ ಈ ಆಫರ್ ಬರದೇ ಹೋಗಿದ್ದಲ್ಲಿ, ಚಿತ್ರರಂಗಕ್ಕೂ ಬರುವ ಮೊದಲು ಆಟೋ ಓಡಿಸುತ್ತಿದ್ದ ರವಿವರ್ಮಾ ಮತ್ತೆ ರಾತ್ರಿ ಆಟೋ ಓಡಿಸಬೇಕು ಅಂತ ಫಿಕ್ಸ್ ಆಗಿದ್ದರು. ಅದೇ ಸಮಯಕ್ಕೆ ಆಫರ್ ಕೊಟ್ಟ ದರ್ಶನ್ ಅವರನ್ನ ರವಿವರ್ಮಾ ನೆನಪಿಸಿಕೊಂಡಿದ್ದಾರೆ. ದರ್ಶನ್ ತಮಗೆ ಗಾಡ್ ಫಾದರ್ ಅಂತಾರೆ ರವಿವರ್ಮಾ. ಇನ್ನು ಅದೆಷ್ಟೋ ಬಾರಿ ತೆಲುಗು ಸಿನಿಮಾಗಳಿಗೆ ಸ್ಟಂಟ್ ಕೊರಿಯೋಗ್ರಾಫಿ ಮಾಡಲು ಅವಕಾಶ ಸಿಕ್ಕಾಗಲೂ, ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡ್ತಿದ್ದ ಕಾರಣ ತೆಲುಗಿನಿಂದ ದೂರ ಉಳಿದಿದ್ದರು. ಸದ್ಯ ರವಿವರ್ಮಾ, ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿಯಲ್ಲೂ ಬೇಡಿಕೆಯ ಸ್ಟಂಟ್ ಮಾಸ್ಟರ್ ಆಗಿದ್ದಾರೆ. ‘ಒಂದು ಚಾಲೆಂಜ್ ಮಾತ್ರ ಇತ್ತು. ಇಲ್ಲಿ ಬೇರೆ ಭಾಷೆಗಳಿಂದ ಸ್ಟಂಟ್ ಮಾಸ್ಟರ್ಗಳನ್ನ ಕರೆಸಿಕೊಳ್ತಿದ್ರು. ಇಲ್ಲಿಯವರ ಮೇಲೆ ಯಾಕೆ ನಮ್ಮವರಿಗೆ ನಂಬಿಕೆ ಇಲ್ಲ ಅನಿಸ್ತಿತ್ತು. ನಾನು ಕೆಲಸ ಮಾಡಿದ ಎಲ್ಲಾ ಸಿನಿಮಾಗಳ ವಿಡಿಯೋ ಮಾಡಿ ಒಂದು ಸಿಡಿಯಲ್ಲಿ ಹಾಕಿ, ಹೈದರಾಬಾದ್ನಲ್ಲಿ ಎರಡು ವರ್ಷ ಎಲ್ಲಾ ಕಡೆ ಸುತ್ತಾಡಿದ್ದೀನಿ, ಅದೂ ಅಲ್ಲಿ ಅವಕಾಶಕ್ಕಾಗಿ. ಈ ಮಧ್ಯೆ ಒಂದು ತೆಲುಗು ಸಿನಿಮಾ ಆಫರ್ ಬಂದಾಗ ನಾನು ಸಂಗೊಳ್ಳಿರಾಯಣ್ಣ ಸಿನಿಮಾ ಮಾಡ್ತಿದ್ದೆ, ಸೋ ಹೋಗಿಲ್ಲ. ಮತ್ತೆ ಹುಡುಗರು ಸಿನಿಮಾ ಮಾಡ್ತಿದ್ದಾಗ ಮತ್ತೊಂದು ತೆಲುಗು ಸಿನಿಮಾಗೆ ಕರೆದ್ರು, ಆಗಲೂ ಹೋಗಿಲ್ಲ. ಕೊನೆಗೆ ತೆಲುಗಿನಲ್ಲಿ ಸಿಕ್ಕಿದ್ದು ಮಹಾತ್ಮ ಸಿನಿಮಾ’ ಅಂತ ಮಾತನಾಡುತ್ತಾ ರವಿವರ್ಮಾ ಹಂಚಿಕೊಂಡಿದ್ದಾರೆ.