ಸುಪ್ರೀಂ ಹೀರೋ ಶಶಿಕುಮಾರ್ ಅವರು ಸ್ಯಾಂಡಲ್ ವುಡ್ ಜಗತ್ತಿನಲ್ಲಿ ೯೦ರ ದಶಕದಲ್ಲಿ ಹಾಸ್ಯಭರಿತ ಸಾಂಸಾರಿಕ ಚಿತ್ರಗಳಲ್ಲಿ ಅನಂತ್ ನಾಗ್ ಅವರನ್ನು ಹೊರತು ಪಡಿಸಿದರೆ ಇವರೇ ಎಂಬ ಮಾತು ಜನ ಜನಿತವಾಗಿತ್ತು. ಶಶಿಕುಮಾರ್ ಅವರು ನಟ ಮಾತ್ರವಲ್ಲದೇ ಉತ್ತಮ ಡ್ಯಾನ್ಸರ್ ಕೂಡ ಆಗಿದ್ದರು. ಹಾಗಾಗಿಯೇ ಇವರು ಮತ್ತಷ್ಟು ಜನ ಮನ್ನಣೆ ಗಳಿಸಿಕೊಳ್ಳಲು ಸಾಧ್ಯವಾಗಿತ್ತು. ೯೦ರ ದಶಕದಲ್ಲಿ ರಾಣಿ ಮಹಾರಾಣಿ, ಮುದ್ದಿನ ಮಾವ, ಕೆಂಪಯ್ಯ ಐಪಿಎಸ್, ಇಬ್ಬರು ಹೆಂಡಿರ ಮುದ್ದಿನ ಪೊಲೀಸ್, ಗಣೇಶನ ಗಲಾಟೆ ಇನ್ನೂ ಮುಂತಾದ ಸಾಂಸಾರಿಕ ಚಿತ್ರಗಳಲ್ಲಿ ಶಶಿಕುಮಾರ್ ಅವರ ಅದ್ಭುತವಾದ ನಟನೆಗೆ ಪ್ರೇಕ್ಷಕರು ಮನ ಸೋತಿದ್ದರು. ಆದರೆ ೧೯೯೮ರಲ್ಲಿ ಆದ ಅಪಘಾತ ಅವರ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತು.
ಶಶಿಕುಮಾರ್ ಅವರು ಕನ್ನಡ ಭಾಷೆಯ ಚಲನಚಿತ್ರಗಳು ಮಾತ್ರವಲ್ಲದೇ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ. ಚಿರಂಜೀವಿ ಸುಧಾಕರ್ ಶಶಿಕುಮಾರ್ ಅವರು ನಟಿಸಿದ ಮೊದಲ ಚಿತ್ರ. ಈ ಚಿತ್ರದ ಮೂಲಕ ಶಶಿಕುಮಾರ್ ಖಳನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ೧೯೮೯ರಲ್ಲಿ ಬಿಡುಗಡೆಯಾದ, ವಿ. ರವಿಚಂದ್ರನ್ ಮತ್ತು ಪೂನಂ ಧಿಲ್ಲೋನ್ ಅಭಿನಯದ ಯುದ್ಧಕಾಂಡ ಚಲನಚಿತ್ರದಲ್ಲಿ ಖಳ-ವಿದ್ಯಾರ್ಥಿಯಾಗಿ ನಟಿಸಿದ್ದಾರೆ. ಇದಾದ ಬಳಿಕ, ಸಿಬಿಐ ಶಂಕರ್ ಮತ್ತು ಎಸ್. ಪಿ. ಸಾಂಗ್ಲಿಯಾನದಂತಹ ದೊಡ್ಡ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರು.
೧೯೯೦ರ ಯಶಸ್ವಿ ಚಲನಚಿತ್ರಗಳಾದ ರಾಣಿ ಮಹಾರಾಣಿ ಮತ್ತು ಬಾರೆ ನನ್ನ ಮುದ್ದಿನ ರಾಣಿ, ಈ ಎರಡು ಚಿತ್ರಗಳು ಶಶಿಕುಮಾರ್ ಅವರನ್ನು ಕನ್ನಡ ಚಿತ್ರರಂಗದ ನಾಯಕನಟನ ಸ್ಥಾನದಲ್ಲಿ ನಿಲ್ಲಿಸಲು ಸಹಕಾರಿಯಾದವು. ಶಶಿಕುಮಾರ್ ಅವರು ಸುಧಾರಾಣಿ, ತಾರಾ, ಸೌಂದರ್ಯ ಮತ್ತು ಸಿತಾರಾ ಅವರಂತಹ ಜನಪ್ರಿಯ ನಟಿಯರೊಂದಿಗೆ ಸಹ ಜೋಡಿಯಾಗಿ ನಟಿಸಿದ್ದಾರೆ. ಅಪಘಾತದಿಂದ ಸುಧಾರಿಸಿಕೊಂಡು ನಿಧಾನವಾಗಿ ಬಣ್ಣದ ಬದುಕಿಗೆ ಕಾಲಿಟ್ಟರು. ಇದಾದ ಬಳಿಕ ಅವರು ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟರು. ಅಲ್ಲಿಯೂ ಕೂಡ ಸಾಕಷ್ಟು ಯಶಸ್ಸು ಗಳಿಸಿಕೊಂಡರು. ಶಶಿಕುಮಾರ್ ಅವರು ಸರಸ್ವತಿ ಎಂಬುವರನ್ನು ಮದುವೆ ಮಾಡಿಕೊಂಡಿದ್ದರು. ಇವರಿಗೆ ಮಗ ಅಕ್ಷಿತ್ ಶಶಿಕುಮಾರ್ ಹಾಗೂ ಮಗಳು ಐಶ್ವರ್ಯ ಶಶಿಕುಮಾರ್ ಎಂಬ ಇಬ್ಬರು ಮಕ್ಕಳಿದ್ದಾರೆ.ಅಕ್ಷಿತ್ ಅವರು ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. ಮಗಳು
ಐಶ್ವರ್ಯ ೨೦೧೯ರಲ್ಲಿ ಸತೀಶ್ ಎಂಬುವರನ್ನು ಮದುವೆಯಾದರು. ಶಶಿಕುಮಾರ್ ಅವರ ಮಗಳು
ಪತ್ರಿಕೋದ್ಯಮ ವಿಷಯದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಅವರು ರಾಜ್ಯದ
ಹೆಸರಾಂತ ಪತ್ರಿಕೆ ಡೆಕ್ಕನ್ ಹೆರಾಲ್ಡ್ ನಲ್ಲಿ ಒಂದಷ್ಟು ಕಾಲ ಪತ್ರಕರ್ತರಾಗಿಯೂ ಕೆಲಸ
ನಿರ್ವಹಿಸಿದ್ದರು. ಮದುವೆಯಾದ ನಂತರ ಅವರು ತಮ್ಮ ವೃತ್ತಿಯನ್ನು ಕೈ ಬಿಟ್ಟರು. ಐಶ್ಚರ್ಯ
ಅವರ ಪತಿ ಸತೀಶ್ ಅವರು ರಿಯಲ್ ಎಸ್ಟೇಟ್ ಬುಸಿನೆಸ್ ಮಾಡುತ್ತಾರೆ.