ಕಿರುತೆರೆಯ ರಿಯಾಲಿಟಿ ಶೋಗಳ ಅಸಲಿಯತ್ತಿನ ಬಗ್ಗೆ ಪ್ರೇಕ್ಷಕರಿಗೆ ಮೊದಲಿನಿಂದಲೂ ಅನುಮಾನ ಇದೆ. ಅದರಲ್ಲೂ ಹಿಂದಿಯ ‘ಇಂಡಿಯನ್ ಐಡಲ್’ ಸಿಂಗಿಂಗ್ ರಿಯಾಲಿಟಿ ಶೋ ಹಲವು ವಿವಾದಗಳನ್ನು ಮಾಡಿಕೊಂಡಿದೆ. ಪ್ರತಿ ದಿನ ಈ ಕಾರ್ಯಕ್ರಮದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹತ್ತು ಹಲವು ಕಾರಣಗಳಿಗಾಗಿ ಇದನ್ನು ಟ್ರೋಲ್ ಮಾಡಲಾಗುತ್ತಿದೆ. ಈಗ ‘ಇಂಡಿಯನ್ ಐಡಲ್’ ಜಡ್ಜ್ಗಳ ಹುಸಿ ಕಣ್ಣೀರು ಎಲ್ಲರಿಂದ ಟೀಕೆಗೆ ಒಳಪಡುತ್ತಿದೆ.
ಇತ್ತೀಚೆಗೆ ಫಾದರ್ಸ್ ಡೇ ಪ್ರಯುಕ್ತ ‘ಇಂಡಿಯನ್ ಐಡಲ್’ ಸ್ಪರ್ಧಿಗಳು ವಿಶೇಷ ಹಾಡುಗಳನ್ನು ಹೇಳಿದರು. ಅಲ್ಲದೆ, ತಮ್ಮ ತಂದೆ ಬಗೆಗಿನ ಕಥೆಗಳನ್ನೂ ವೇದಿಕೆ ಮೇಲೆ ಶೇರ್ ಮಾಡಿಕೊಂಡರು. ಅದನ್ನು ಕೇಳಿದ ನಿರ್ಣಾಯಕರಾದ ಹಿಮೇಶ್ ರೇಷಮಿಯಾ ಮತ್ತು ನೇಹಾ ಕಕ್ಕರ್ ಅವರು ಕಣ್ಣೀರು ಹಾಕಿದರು. ಆದರೆ ಅವರು ನಿಜವಾಗಿಯೂ ಅತ್ತಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದು ಹುಸಿ ಕಣ್ಣೀರು ಎಂದು ಟ್ರೋಲ್ ಮಾಡಲಾಗುತ್ತಿದೆ.
ಬರುಬರುತ್ತ ಇದು ದೈನಂದಿನ ಧಾರಾವಾಹಿ ಥರ ಆಗುತ್ತಿದೆ. ಬರೀ ಡ್ರಾಮಾ ಹೆಚ್ಚಾಗುತ್ತಿದೆ. ಜಡ್ಜ್ಗಳು ಓವರ್ ಆ್ಯಕ್ಟಿಂಗ್ ಮಾಡುವುದನ್ನು ನಿಲ್ಲಿಸಬೇಕು ಎಂದು ಜನರು ಟ್ರೋಲ್ ಮಾಡಿದ್ದಾರೆ. ಕೆಲವರು ಈ ಶೋನಿಂದ ನಿರಾಶೆಗೊಂಡಿರುವುದು ಮಾತ್ರವಲ್ಲದೆ ವಿಪರೀತ ಕೋಪವನ್ನೂ ವ್ಯಕ್ತಪಡಿಸಿಕದ್ದಾರೆ. ಒಟ್ಟಾರೆ ಈ ಪ್ರಸಂಗಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಹಲವು ಬಗೆಯ ಮೀಮ್ಗಳು ಹರಿದಾಡುತ್ತಿವೆ.
ಈ ಹಿಂದೆ ಕೂಡ ಇಂಡಿಯನ್ ಐಡಲ್ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದವು. ಸ್ಪರ್ಧಿಗಳನ್ನು ಹೊಗಳುವಂತೆ ಆಯೋಜಕರು ಒತ್ತಾಯ ಹೇರುತ್ತಾರೆ. ಸ್ಪರ್ಧಿಗಳ ನಡುವೆ ಸುಳ್ಳು ಪ್ರೇಮಕಥೆಯನ್ನು ಸೃಷ್ಟಿಸಲಾಗುತ್ತದೆ ಎಂಬಿತ್ಯಾದಿ ಆರೋಪಗಳನ್ನು ಮಾಡಲಾಗಿತ್ತು. ಈ ಶೋಗೆ ಅತಿಥಿಯಾಗಿ ಹೋಗಿದ್ದ ಕಿಶೋರ್ ಕುಮಾರ್ ಪುತ್ರ ಅಮಿತ್ ಕುಮಾರ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.
‘ಸ್ಪರ್ಧಿಗಳು ಹೇಗೆ ಹಾಡಿದರೂ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಮೇಕರ್ಗಳು ನಮಗೆ ಹೇಳುತ್ತಿದ್ದರು. ಅದು ನಿಜಕ್ಕೂ ದೊಡ್ಡ ವಿಚಾರ. ಹೀಗಾಗಿ, ನನಗೆ ಜಡ್ಜ್ ಆಗಿ ಮುಂದುವರಿಯೋಕೆ ಸಾಧ್ಯವಾಗುತ್ತಿಲ್ಲ. ಅವರಿಗೆ ಹೇಗೆ ಬೇಕೋ ಹಾಗೆ ಇರೋಕೆ ಸಾಧ್ಯವಿಲ್ಲ. ಹೀಗಾಗಿ, ನಾನು ಹೊರ ಬಂದೆ. ನಾನು ಯಾವುದೇ ಶೋಗಳಿಗೂ ಈಗ ಜಡ್ಜ್ ಆಗಿ ಹೋಗುತ್ತಿಲ್ಲ’ ಎಂದು ಇಂಡಿಯನ್ ಐಡಲ್ ಐದು ಹಾಗೂ ಆರನೇ ಸೀಸನ್ ಜಡ್ಜ್ ಆಗಿದ್ದ ಸುನಿಧಿ ಚೌಹಾಣ್ ಹೇಳಿದ್ದರು.