ಖ್ಯಾತ ನಟಿಯ ಅಣ್ಣನನ್ನು ಮದುವೆಯಾದರೂ ವಿಜಯಲಕ್ಷ್ಮಿ ಅಕ್ಕ ಉಷಾ ಈ ಪರಿಸ್ಥಿತಿಗೆ ಬರಲು ಕಾರಣವೇನು


 ಒಂದು ಕಾಲದಲ್ಲಿ ತಮ್ಮ ಪ್ರತಿಭೆ ಮೂಲಕ ಅಭಿಮಾನಿಗಳನ್ನು ರಂಜಿಸಿದ ಎಷ್ಟೋ ಕಲಾವಿದರು ಇಂದು ತೆರೆ ಮರೆಗೆ ಸರಿದಿದ್ದಾರೆ. ಕೆಲವರು ಈ ಪ್ರಪಂಚದಲ್ಲೇ ಇಲ್ಲವಾದರೆ ಮತ್ತೆ ಕೆಲವರು ಚಿತ್ರರಂಗದಿಂದ ಶಾಶ್ವತವಾಗಿ ದೂರವಾಗಿದ್ಧಾರೆ. ಕೆಲವರು ಬೇಡಿಕೆ ಇರುವ ಸಮಯದಲ್ಲಿ ಸಂಪಾದಿಸಿ ಭವಿಷ್ಯಕ್ಕಾಗಿ ಕೂಡಿಟ್ಟರೆ, ಮತ್ತೆ ಕೆಲವರು ಮುಂದಿನ ದಿನಗಳ ಬಗ್ಗೆ ಯೋಚಿಸುವುದೇ ಇಲ್ಲ. ಆ ಸಮಯದಲ್ಲಿ ಪಾಷ್ ಜೀವನ ನಡೆಸಿದ್ದ ಹಲವರು ಇಂದು ಊಟಕ್ಕಾಗಿ ಕೂಡಾ ಕಷ್ಟ ಪಡುತ್ತಿರುವ ಎಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ‘ನಾಗಮಂಡಲ’ ಸಿನಿಮಾ ಖ್ಯಾತಿಯ ವಿಜಯಲಕ್ಷ್ಮಿ. ಜೋಡಿಹಕ್ಕಿ, ಭೂಮಿತಾಯಿ ಚೊಚ್ಚಲ ಮಗ, ಅರುಣೋದಯ, ಸ್ವಸ್ತಿಕ್, ಹಬ್ಬ, ಸೂರ್ಯವಂಶ, ಪಂಜಾಬಿ ಹೌಸ್, ದೇವದೂತನ್, ಫ್ರೆಂಡ್ಸ್, ಹನುಮಾನ್ ಜಂಕ್ಷನ್ ಸೇರಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ ವಿಜಯಲಕ್ಷ್ಮಿ ಸುಮಾರು 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

1990 ರ ದಶಕದಲ್ಲಿ ಬೇಡಿಕೆಯ ನಟಿಯಾಗಿದ್ದ ವಿಜಯಲಕ್ಷ್ಮಿ 2008 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಂಗಾರದ ಬೇಟೆ’ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು. ಆದರೆ ಕ್ರಮೇಣ ಆಕೆಗೆ ಅವಕಾಶಗಳು ಕಡಿಮೆಯಾಗುತ್ತಾ ಬಂತು. ನಂತರ ಅವರು ಸಿನಿಮಾಗಳನ್ನು ಬಿಟ್ಟು ತಮಿಳು ಕಿರುತೆರೆಯತ್ತ ಮುಖ ಮಾಡಿದರು. ಕೆಲವು ದಿನಗಳ ನಂತರ ಅಲ್ಲೂ ಕೂಡಾ ಅವರಿಗೆ ಡಿಮ್ಯಾಂಡ್ ಕಡಿಮೆಯಾಯ್ತು. ಪರಿಣಾಮ ವಿಜಯಲಕ್ಷ್ಮಿ ಆರ್ಥಿಕ ಸಮಸ್ಯೆಗೆ ಸಿಲುಕಿದರು. ಸುಮಾರು 2 ವರ್ಷಗಳ ಹಿಂದೆ ವಿಜಯಲಕ್ಷ್ಮಿ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದಾಗಲೇ ಆಕೆ ಇಷ್ಟೆಲ್ಲಾ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದದ್ದು. ಇನ್ನು ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ಕೂಡಾ ನಟಿ. 2-3 ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಉಷಾ, ನಂತರ ಮದುವೆಯಾದ್ದರಿಂದ ಸಿನಿಮಾದಿಂದ ದೂರಾದರು. ಇದೀಗ ಉಷಾ ಕೂಡಾ ಪತಿಯಿಂದ ದೂರಾಗಿ ಬಹಳ ಶೋಚನೀಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಅಂದಹಾಗೆ ಉಷಾದೇವಿ ಮದುವೆಯಾದದ್ದು ಖ್ಯಾತ ಬಹುಭಾಷಾ ನಟಿ ಜಯಪ್ರದಾ ಅವರ ಸಹೋದರ ರಾಜಬಾಬು ಅವರನ್ನು. ಆರಂಭದಲ್ಲಿ ಇವರ ದಾಂಪತ್ಯ ಜೀವನ ಚೆನ್ನಾಗಿತ್ತಾದರೂ ನಂತರ ವರದಕ್ಷಿಣೆ ಕಿರುಕುಳದಿಂದ ಉಷಾ ಕೂಡಾ ಪತಿಯಿಂದ ದೂರಾದರು. ಈ ದಂಪತಿಗೆ ಒಬ್ಬ ಮಗ ಇದ್ದು, ವಿಜಯಲಕ್ಷ್ಮಿ ಹೇಳುವ ಪ್ರಕಾರ ಉಷಾ ತಮ್ಮ ಪುತ್ರನನ್ನು ನೋಡಿ 10 ವರ್ಷಗಳಾಯ್ತಂತೆ. ಸುಮಾರು ಒಂದು ತಿಂಗಳ ಹಿಂದೆ ಈ ಬಗ್ಗೆ ವಿಡಿಯೋ ಮಾಡಿ ಬಿಡುಗಡೆ ಮಾಡಿರುವ ವಿಜಯಲಕ್ಷ್ಮಿ, ನಮ್ಮ ಪರಿಸ್ಥಿತಿ ಚೆನ್ನಾಗಿಲ್ಲ. ಉಷಾಳನ್ನು ಪತಿ ಮನೆಗೆ ಕಳಿಸೋಣ ಎಂದರೆ ಯಾರೂ ಫೋನ್​ಗೆ ಸಿಗುತ್ತಿಲ್ಲ. ಜಯಪ್ರದಾ ಕೂಡಾ ಏನೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ವಿಜಯಲಕ್ಷ್ಮಿ, ”ಉಷಾಗೆ ಮೇಜರ್ ಸರ್ಜರಿ ಆಗಿದೆ. ಹೇಗೋ ಕಷ್ಟಪಟ್ಟು ಅವಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಮುಂದೆ ಏನು ಮಾಡಬೇಕು ತಿಳಿಯುತ್ತಿಲ್ಲ. ಯಾರೂ ಸಹಾಯ ಮಾಡುತ್ತಿಲ್ಲ. ಕನ್ನಡ ಚಿತ್ರರಂಗದ ಹಿರಿಯರು ನನಗೆ ಸಹಾಯ ಮಾಡಿ” ಎಂದು ಮನವಿ ಮಾಡಿದ್ದಾರೆ. 2 ವರ್ಷಗಳ ಹಿಂದೆ ವಿಜಯಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇದೇ ಉಷಾದೇವಿ ಮಾಧ್ಯಮಗಳ ಮುಂದೆ ಬಂದು ” ಚಿಕಿತ್ಸೆಗೆ ಸಹಾಯ ಮಾಡಿ, ಮುಂದಿನ ದಿನಗಳಲ್ಲಿ ಕೆಲಸ ಮಾಡಿ ನಿಮ್ಮ ಋಣ ತೀರಿಸುತ್ತೇನೆ” ಎಂದು ಮನವಿ ಮಾಡಿದ್ದರು. ಆದರೆ ಇದೀಗ ಉಷಾ ಪರಿಸ್ಥಿತಿ ಬಹಳ ಗಂಭೀರವಾಗಿದೆ. ”ನನಗಿರುವ ಒಂದೇ ಒಂದು ಆಸರೆ ನನ್ನ ಅಕ್ಕ ಉಷಾದೇವಿ. ಆದರೆ ಈಗ ಆಕೆ ಇರುವ ಸ್ಥಿತಿ ನೋಡಿದರೆ ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ” ಎಂದು ವಿಜಯಲಕ್ಷ್ಮಿ ಕಣ್ಣೀರಿಡುತ್ತಿದ್ಧಾರೆ. ಈ ಸಮಯದಲ್ಲಿ ಉಷಾ ಪತಿ ಆಕೆಯ ಸಹಾಯಕ್ಕೆ ಬರುವುದು ಅನುಮಾನ. ಕನ್ನಡ ಚಿತ್ರರಂಗದ ವತಿಯಿಂದ ವಿಜಯಲಕ್ಷ್ಮಿಗೆ ಏನಾದರೂ ಸಹಾಯ ಆಗಬಹುದಾ ಎಂಬುದನ್ನು ಕಾದುನೋಡಬೇಕಿದೆ.