ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ಸಹೋದರತೆಯ ಪ್ರೀತಿಯನ್ನು ತೋರಿಸುವ ಹಬ್ಬವೆಂದರೇ ಅದುವೇ ನಾಗರ ಪಂಚಮಿ.
ನಾಗರಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ. ಪಂಚಮಿ ಹಬ್ಬದ ಹಿಂದಿನ ದಿನ ಹೆಣ್ಣು ಮಕ್ಕಳು ತಮ್ಮ ಅಣ್ಣ ತಮ್ಮಂದಿರ ಆಯುಷ್ಯ ಹೆಚ್ಚಾಗಲೆಂದು ಪ್ರಾರ್ಥಿಸಿ ಉಪವಾಸ ಮಾಡುತ್ತಾರೆ. ನಾಗರಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ.
ನಾಗರಪಂಚಮಿ ಮಂಗಲಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. `ನಾಗರ ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ‘ ಎನ್ನುವ ಜಾನಪದ ಹಾಡು ಹಬ್ಬದ ವಿಶೇಷತೆ ಸಾರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.
ಹೌದು ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ, ಅಣ್ಣ ಬರಲಿಲ್ಲಾ ಕರಿಯಾಕ ಅಂತ ಜಾನಪದ ಗೀತೆಯಿದೆ. ಉತ್ತರ ಕರ್ನಾಟಕ ಭಾಗದ ಹಬ್ಬಗಳ ಹೆಬ್ಬಾಗಿಲಾಗಿರುವ ಶ್ರಾವಣ ಮಾಸದಲ್ಲಿ ಆಚರಿಸುವ ಬಹು ದೊಡ್ಡ ಹಬ್ಬ ಇದು. ನಾಗರ ಪಂಚಮಿಗೆ ಸಹೋದರಿಯರು ಬಂದು ಸಹೋದರರು ಮತ್ತು ಆತನ ಕುಟುಂಬದ ಜೊತೆ ಸೇರಿ ನಾಗರಾಜನಿಗೆ ಹಾಲೆರದು, ತನ್ನ ಅಣ್ಣ ಖುಷಿಯಾಗಿರಲಿ ಎಂದು ಪ್ರಾರ್ಥಿಸುತ್ತಾಳೆ.
ಪುರಾಣಗಳು ನಾಗರ ಪಂಚಮಿಗೆ ಸಂಬಂಧಿಸಿದಂತೆ ಮತ್ತೊಂದು ಕಥೆಯನ್ನು ಹೇಳುತ್ತದೆ. ದೇವತೆ ಸತ್ಯೇಶ್ವರಿಯ ಸಹೋದರ ಮರಣ ಹೊಂದಿದಾಗ ಆತನನ್ನು ಉಳಿಸಿಕೊಳ್ಳಲು ಸತ್ಯೇಶ್ವರಿಯು ನಾಗರ ಪಂಚಮಿಯಂದು ಉಪವಾಸವನ್ನು ಕೈಗೊಳ್ಳುತ್ತಾಳೆ. ಆಕೆಯ ಕಠಿಣ ಉಪವಾಸ ಮತ್ತು ನಾಗರ ಪೂಜೆಯಿಂದ ಆಕೆಯ ಸಹೋದರ ಮರು ಜೀವವನ್ನು ಪಡೆಯುತ್ತಾನೆ. ಆದ್ದರಿಂದ ನಾಗರ ಪಂಚಮಿಯಂದು ಸಹೋದರರ ಆರೋಗ್ಯಕ್ಕಾಗಿ, ಆಯಸ್ಸಿಗಾಗಿ ಉಪವಾಸವನ್ನು ಕೈಗೊಳ್ಳುವುದು ಉತ್ತಮ.
ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ.