ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗೂ ರಂಗಭೂಮಿ ಕಲಾವಿದೆ ಪ್ರತಿಮಾದೇವಿ ಇಹಲೋಕ
ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದ ನಿರ್ಮಾಪಕ ಮತ್ತು ನಿರ್ದೇಶಕ, ಮಹಾತ್ಮ ಪಿಕ್ಚರ್ಸ್
ಸಂಸ್ಥೆಯ ಸ್ಥಾಪಕ ಶಂಕರ್ ಸಿಂಗ್ ಪತ್ನಿ ಪ್ರತಿಮಾದೇವಿ ಅವರಿಗೆ 88 ವರ್ಷ
ವಯಸ್ಸಾಗಿತ್ತು. ಪ್ರತಿಮಾದೇವಿ ಕನ್ನಡದ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್
ಬಾಬು ಹಾಗೂ ನಟಿ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ತಾಯಿ ಆಗಿರುವ ಪ್ರತಿಮಾದೇವಿ
1947ರಲ್ಲಿ ಕೃಷ್ಣಲೀಲಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ಇದರೊಂದಿಗೆ ಜೊತೆಗೆ ಮಹಾನಂದ, ನಾಗ ಕನ್ನಿಕ, ಶಿವ ಪಾರ್ವತಿ, ಜಗನ್ಮೋಹಿನಿ ಸಿನಿಮಾ
ಸೇರಿದಂತೆ ಬರೋಬ್ಬರಿ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರತಿಮಾದೇವಿ
ಎಸ್.ವಿ.ರಾಜೇಂದ್ರಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜೈ ರಾಜ್ ಸಿಂಗ್ ಮೂರು ಜನ ಗಂಡು
ಮಕ್ಕಳು, ಹೆಣ್ಣು ಮಗಳಾದ ವಿಜಯಲಕ್ಷ್ಮಿ ಸಿಂಗ್ ಅವರನ್ನು ಅಗಲಿದ್ದಾರೆ.
ಹಿರಿಯ ನಟಿ, ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಅವರು ಅಮ್ಮನ ನೆನಪಿನಲ್ಲಿ ಬರೆದ
ಭಾವನಾತ್ಮಕ ಪತ್ರವೊಂದು ಫೇಸ್ ಬುಕ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಇತ್ತೀಚಿಗಷ್ಟೇ
ವಿಜಯಲಕ್ಷ್ಮಿ ಸಿಂಗ್ ಅವರ ತಾಯಿ ನಿಧನರಾಗಿದ್ದರು. ಇದೇ ನೆನಪಿನಲ್ಲಿ ಅಮ್ಮನನ್ನು
ನೆನಪು ಬರೆದ ಭಾವನಾತ್ಮಕ ಸಾಲುಗಳು ಅವರ ಮೇಲಿನ ಪ್ರೀತಿಯನ್ನು ಸಾರಿ ಹೇಳುತ್ತಿವೆ. ನನ್ನ ಮುದ್ದು “ಅಮ್ಮ” ಇಂದಿಗೆ ನೀನು ನಮ್ಮನ್ನ ಅಗಲಿ 15 ದಿನಗಳಾಯಿತು..ನಾನು
ಹುಟ್ಟಿದಾಗಿನಿಂದ ನಿನ್ನ ಬಿಟ್ಟು ಬೇರೆ ಇದ್ದಿಲ್ಲ . ಈಗ ನೀನು ಇರದ ಈ ಜಗತ್ತು ನನಗೆ
ಕಷ್ಟ ಎನಿಸುತ್ತಿದೆ. ಎಷ್ಟು ವಿಷಯ ನಿಂಗೆ ಹೇಳಬೇಕು, ಕೆಲವು ಪ್ರಶ್ನೆಗಳಿಗೆ ಉತ್ತರ
ತಿಳಿದುಕೊಳ್ಳಬೇಕು ಅನಿಸುತ್ತೆ, ಆದರೆ… ಎಲ್ಲ ವಿಷಯ ಜೀವನದಲಿ ನನಗೆ ಕಲಿಸಿದೆ, ಆದರೆ
ನಿನ್ನ ಬಿಟ್ಟು ಬದಕಲು ಯಾಕೆ ಕಲಿಸಲಿಲ್ಲ ಅಮ್ಮ ..ಆ ದಿನ ಬಾಲ್ಕನಿಲಿ ಕೂತು ಮುಂಜಾನೆ
ಕಾಫಿ ಸವಿಯುತ್ತ ನೀನು ನಿನ್ನ ಬರ್ತ್ ಡೇ ಸೆಲಬ್ರೇಷನ್ ಇನ್ನೂ 3 ದಿನಗಳಲ್ಲಿ ಅಂತ ರೆಡಿ
ಆಗುತ್ತಿದೆ, ಮೊಮಕ್ಕಳ ಜೊತೆ ಮೆನು ಡಿಸ್ಕಸ್ ಮಾಡ್ತಿದ್ದೆ … ಕಣ್ಣಿಗೆ ಕಟ್ಟಿದ ಹಾಗಿದೆ. ನೀನು ಸ್ನಾನ ಮಾಡಿ ದೇವರ ಎಲ್ಲ ಫೋಟೋಗಳಿಗೆ ದಾಸವಾಳ ಮುಡಿಸಿ, ದೀಪ ಬೆಳಗಿಸಿ ಸುಮಾರು
ಹೊತ್ತು ಮಂತ್ರ ಜಪಿಸುತ್ತ ಕುಳಿತಿದ್ದೆ. ನಂತರ ನಾನೇ ಬಂದು ಹೇಳಿದೆ ಜಾಸ್ತಿ ಅಡುಗೆ ಬೇಡ
ಅಂತ. ಇಲ್ಲ ಬರೀ ಸಾರು ಪಲ್ಯ ಮಾಡ್ತೀನಿ ಅಂದೆ, ಸರಿ ಅಂತ ನಾನು ರೂಮ್ ನಲ್ಲಿ ಕೆಲಸ
ಮುಂದುವರೆಸಿದೆ. ಸುಮಾರು 1.30 ಕ್ಕೆ ಮತ್ತೆ ನಿನ್ನ ಬಳಿ ಬಂದು ಹರಿಣಿ ಆಂಟಿಗೆ ಫೋನ್
ಮಾಡ್ಬೇಕು ಅಂದಾಗ ಟೀ ಟೈಮ್ ಸಂಜೆ ಮಾಡೋಣ ಅಂದೆ. ಆಗ ನೀನು ಇಂಗು ಒಗ್ಗರ್ಣೆ ಕೊಡ್ತಾ
ಇದ್ದೆ. ಅದೇ ನಾನು ನಿನ್ನ ಜೊತೆ ಕೊನೆಬಾರಿ ನೇರ ಮಾತನಾಡಿದ್ದು.
ನಂತರ ರೂಂ ನಿಂದ ನಿನ್ನ ನೋಡಿದಾಗ ಹಾಲ್ ನಲ್ಲಿ ಇದ್ದ ಸೋಫಾ ಮೇಲೆ 2 ದಿಂಬುಗಳನ್ನು
ಇಟ್ಟು ಮಲಗುತಿದ್ದೆ. ಯಾಕೆ ಮಧ್ಯಾಹ್ನ ಸದ ಬಹಾರ್ ನಲ್ಲಿ ಸಿನೆಮಾ ನೋಡುತಿಲ್ಲವಲ್ಲ
ಅಂದೆನಿಸಿತ್ತು. ಫ್ಯಾನ್ ಹಾಕಿ ಸೆಕೆ ಜಾಸ್ತಿ ಅಂತ ಮಲಗಿದ್ದಾರೇನೊ ಅನಿಸಿತ್ತು. ಸರಿ
ಮಲಗಲಿ 15 ನಿಮಿಷ ಬಿಟ್ಟು ಎಬ್ಬಿಸೋಣ ಅಂದುಕೊಂಡೆ..ಆದರೆ ಅಮ್ಮ ಆ ಸಮಯದಲ್ಲಿ ನೀನು
ನಿನ್ನ ಕೊನೆ ಪ್ರಯಾಣಕ್ಕೆ ಸಿದ್ದವಾಗಿದ್ದೆ ಅಂತ ಗೊತ್ತಾಗಲಿಲ್ಲ …. ಸ್ವಿಚ್ ಆನ್ /ಆಫ್
ಆಗುವುದರಲ್ಲಿ ನೀನು ಇಲ್ಲ ಅದು ಹೇಗೆ ? ಸಿನೆಮಾದಲ್ಲಿ ಸ್ಟಾಪ್ ಬ್ಲಾಕ್ ಲಿ ಮಾಯವಾದಂತೆ …
ತಿಳಿದವರು ಹೇಳ್ತಾರೆ ಶರಣರನ್ನು ಮರಣದಲ್ಲಿ ಕಾಣು ಅಂತ, ಆದರೆ ಹೀಗೆ ತಕ್ಷಣ ನಮ್ಮನ್ನ
ಬಿಟ್ಟು ಹೋದರೆ ನಾನು ಹೇಗೆ ಬಾಳಲಿ, ಸಂಕಟ ತಡೆಯಲಾರೆ….ಕಾಲ ಮರೆಸುತ್ತೆ ಅಂತಾರೆ, ಇಲ್ಲ
ಇದು ನಿರಂತರ.