ನಮ್ಮಲ್ಲಿ ಅನೇಕರು ತಮ್ಮ ದೇಹ ಸೌಂದರ್ಯ, ಅಂದ, ಎತ್ತರ ಹೀಗೆ ಆಲೋಚನೆ ಮಾಡುತ್ತಾ ಬಹಳ ಸಮಯವನ್ನು ವ್ಯರ್ಥ ಮಾಡುತ್ತಾ ಇರುತ್ತಾರೆ. ಇದು ಇಂದಿನ ವಾಸ್ತವ ಕೂಡಾ ಹೌದು. ಏಕೆಂದರೆ ಇಂದಿನ ಸಮಾಜದಲ್ಲಿ ಬೆಳ್ಳಗೆ, ತೆಳ್ಳಗೆ, ಆಕರ್ಷಕವಾಗಿ ಹಾಗೂ ಅಂದವಾಗಿದ್ದರೆ ಮಾತ್ರವೇ ಮಾನ್ಯ ಎನ್ನುವಂತಾಗಿದೆ. ಆದರೆ ವಾಸ್ತವ ಏನೆಂದರೆ ಜೀವನದಲ್ಲಿ ಅಂದ, ಎತ್ತರ, ರೂಪಕ್ಕಿಂತ ಮುಖ್ಯವಾಗಿ ಏನಾದರೂ ಸಾಧಿಸಬೇಕೆಂಬ ಗುರಿಯನ್ನು ಇಟ್ಟುಕೊಂಡು ಮುಂದೆ ಸಾಗಿ, ಸಾಧನೆಯನ್ನು ಮಾಡುವ ಮೂಲಕ ಅದೆಷ್ಟೋ ಜನರಿಗೆ ಅವರು ಸ್ಪೂರ್ತಿಯಾಗುವರು. ನಾವು ನಿಮಗೆ ಅಂತಹುದೇ ಒಬ್ಬ ಸಾಧಕಿ ಆರತಿ ಡೋಗ್ರಾ ಕುರಿತಾಗಿ ನಾವು ಹೇಳಲು ಹೊರಟಿದ್ದೇವೆ. ಈ ಸಾಧಕಿಯು ದೈಹಿಕವಾಗಿ ಎತ್ತರವಾಗಿಲ್ಲದೇ ಇರಬಹುದು. ಆದರೆ ಮಾನಸಿಕವಾಗಿ ಹಾಗೂ ಬುದ್ಧಿ ಶಕ್ತಿಯಲ್ಲಿ ಆಕೆಯ ಮಾಡಿರುವ ಸಾಧನೆ ಇಂದು ಅನೇಕರಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗಿದ್ದಾರೆ.
ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಆರತಿ ಡೋಗ್ರಾ ಅವರ ಜನನವಾಯಿತು. ಇವರ ತಂದೆಯ ಹೆಸರು ನರೇಂದ್ರ ಡೋಗ್ರಾ, ಇವರು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದವರು. ಆರತಿ ಅವರ ತಾಯಿ ಕುಮ್ ಕುಮ್ ಡೋಗ್ರಾ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕಿ ಆಗಿದ್ದರು. ಆರತಿ ಹುಟ್ಟಿದಾಗ ವೈದ್ಯರು ಆಕೆಯ ಪೋಷಕರಿಗೆ ಮಗುವಿಗೆ ಶಾರೀರಿಕವಾಗಿ ಸಮಸ್ಯೆ ಇದೆ ಎಂದು ಹೇಳಿದಾಗ, ಅವರು ಇನ್ನೊಂದು ಮಗು ಬೇಡ ಎಂದು ನಿರ್ಧರಿಸಿ, ತಮ್ಮೆಲ್ಲಾ ಪ್ರೀತಿಯನ್ನು ಅವರು ಆರತಿಗೆ ನೀಡಲು ನಿರ್ಧಾರ ಮಾಡಿದರು. ಮಗಳಿಗೆ ಉತ್ತಮ ಶಿಕ್ಷಣ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಿರ್ಧಾರವನ್ನು ಅವರು ಮಾಡಿದ್ದರು.
ಆರತಿ ಅವರ ಶಾಲಾ ಶಿಕ್ಷಣವು ಡೆಹರಾಡೂನ್ ನ ಒಂದು ಉತ್ತಮವಾದ ಶಾಲೆಯಲ್ಲಿ ನಡೆಯಿತು. ದೆಹಲಿ ವಿಶ್ವವಿದ್ಯಾಲಯದ ಪರಿಧಿಯ ಶ್ರೀರಾಮ್ ಕಾಲೇಜಿನಲ್ಲಿ ಕಾಮರ್ಸ್ ನಲ್ಲಿ ಪದವಿಯನ್ನು ಪಡೆದರು ಆರತಿ. ಅನಂತರ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆಯನ್ನು ನಡೆಸಿದರು. 2006 ರಲ್ಲಿ ಈ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಮುಗಿಸಿದರು ಆರತಿ, ಆ ಮೂಲಕ ಅವರು ತಮ್ಮ ತಂದೆ ತಾಯಿ ಹಾಗೂ ತನಗೆ ಎಲ್ಲಾ ಹಂತದಲ್ಲಿಯೂ ನೆರವಾದ ಎಲ್ಲರಿಗೂ ಹೆಮ್ಮೆಯನ್ನು ತಂದು ಕೊಟ್ಟರು. ಇವರ ಪೋಸ್ಟಿಂಗ್ ಬಿಕಾನೇರ್ ನಲ್ಲಿ ಆದಾಗ ಅಲ್ಲಿ ಜನರಲ್ಲಿ ನೈರ್ಮಲ್ಯದ ಅವಗಾಹನೆ ಮೂಡಿಸಲು ಬಂಕೋ ಬಿಕಾಣೋ ಎನ್ನುವ ಅಭಿಯಾನ ಆರಂಭಿಸಿದರು.
ಆರತಿ ಸುಮಾರು 195 ಗ್ರಾಮಗಳಲ್ಲಿ ಜನರಿಗೆ ಸ್ವಚ್ಚತೆಯ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಿ ಅದರಲ್ಲಿ ಯಶಸ್ಸನ್ನು ಪಡೆದುಕೊಂಡರು. ಆರತಿ ಅವರ ಈ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಹಾ ಹಾಡಿ ಹೊಗಳಿದ್ದಾರೆ. ಆರತಿ ಅವರ ಎತ್ತರ ಕಡಿಮೆ ಇರುವುದರಿಂದ ಅವರು ಹೋದ ಕಡೆಯಲ್ಲಿ ಕೆಲವು ನೆಗಟಿವ್ ಕಾಮೆಂಟ್ ಗಳು ಕೇಳಿ ಬಂದವು. ಆದರೆ ಆರತಿ ಯಾವುದಕ್ಕೂ ಅಂಜಲಿಲ್ಲ. ಜನರ ಮಾತಿಗೆ ಅವರು ಬೇಸರ ಮಾಡಿಕೊಳ್ಳಲಿಲ್ಲ. ಆರತಿ ಅವರ ಸಾಧನೆ ಹಾಗೂ ಅವರ ಕಾರ್ಯ ಇಂದು ಶ್ಲಾಘನೀಯ ಎನಿಸಿದೆ.