ಮನೆ ಸದಸ್ಯರಿಗೂ ತಿಳಿಯದೇ ಕೋಣೆಯಲ್ಲೇ ನಡೆದಿತ್ತು ಹತ್ತು ವರ್ಷದ ಸಂಸಾರ:ಪ್ರೀತಿ ಕಥೆ ಕೇಳಿ ಬೇಸ್ತು ಬಿದ್ದ ಪೊಲೀಸರು

 


ವಯಸ್ಸಿಗೆ ಬಂದ ಹುಡುಗ ಹುಡುಗಿ ಪ್ರೀತಿಯಲ್ಲಿ ಬೀಳುವುದು ಹೊಸ ವಿಚಾರವೇನೂ ಅಲ್ಲ. ಪ್ರೀತಿ ಮಾಡುತ್ತಾರೆ, ಮೆನಯಿಂದ ಹೊರಗೆ ಭೇಟಿ ಆಗ್ತಾರೆ, ಪೋಷಕರನ್ನು ಒಪ್ಪಿಸಿ ಮದುವೆ ಮಾಡಿಕೊಂಡು ಸುಖವಾಗಿ ಸಂಸಾರ ನಡೆಸುತ್ತಾರೆ. ಆದರೆ ಮನೆ ಬಿಟ್ಟು ಹೋಗಿ ಮದುವೆ ಮಾಡಿಕೊಂಡು ಸಂಸಾರ ನಡೆಸುತ್ತಾರೆ. ಕೆಲವರು ಪ್ರೀತಿ ಹೆಸರಲ್ಲಿ ಸಮಯ ಕಳೆದು ಸುಮ್ಮನಾಗುತ್ತಾರೆ. ಪಾರ್ಕ್‌, ರೂಂಗಳಲ್ಲಿ ಸಮಯ ಕಳೆದು ತಮ್ಮ ಪಾಡಿಗೆ ತಮ್ಮ ದಾರಿ ಹಿಡಿದು ದೂರವಾಗುತ್ತಾರೆ. ಆದರೆ ಇಲ್ಲೊಬ್ಬ ಭೂಪ ತನ್ನ ಮನೆಯ ರೂಮಿನಲ್ಲಿಯೇ ತನ್ನ ಪ್ರೇಯಸಿಯನ್ನು ಕರೆತಂದು ಬರೋಬ್ಬರಿ ಹತ್ತು ವರ್ಷ ಕಾಲ ಕಳೆದಿದ್ದಾನೆ. ಆದರೆ ಈ ಬಗ್ಗೆ ಮನೆಯ ಯಾವುದೇ ಸದಸ್ಯರಿಗೆ ತಿಳಿದೇ ಇರಲಿಲ್ಲ. ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ. ‌

ಈ ಘಟನೆ ನಡೆದದ್ದು, ಪಕ್ಕ ಕೇರಳ ರಾಜ್ಯದಲ್ಲಿ. ಪಾಲಕ್ಕಾಡ್ ಜಿಲ್ಲೆಯ ಅರಿಯೂರು ಸಮೀಪದ ಕರೈಕಟ್ಟುಪರಂಬು ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ. ಯುವಕ ಹಾಗೂ ಯುವತಿ ಇಬ್ಬರೂ ಅಕ್ಕಪಕ್ಕದ ಮನೆಯವರು. ಸುಮಾರು ನೂರು ಮೀಟರ್ ದೂರದ ಮನೆಯಲ್ಲಿ ವಾಸ ಮಾಡುತ್ತಿದ್ದರು.

2010ರಲ್ಲಿ ಹತ್ತೊಂಬತ್ತು ವರ್ಷದ ಯುವತಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಷ್ಟು ಹುಡುಕಿದರೂ ಆಕೆಯ ಸುಳಿವು ಸಿಗಲಿಲ್ಲ. ಮನೆಯವರು ಕೊರಗಿ ಕೊರಗಿ ಆಕೆಯನ್ನು ಮರೆತೇ ಬಿಟ್ಟರು. ಆದರೆ ಆಕೆ ಪಕ್ಕದ ಮನೆಯಲ್ಲೇ ಹತ್ತು ವರ್ಷಗಳಿಂದ ವಾಸ ಮಾಡುತ್ತಿದ್ದಳು ಎಂಬ ವಿಚಾರ ಯಾರಿಗೂ ತಿಳಿಯಲೇ ಇಲ್ಲ. ನೆರೆಮನೆಯ ಪ್ರಿಯಕರ ಆಕೆಯನ್ನು ಕರೆತಂದು ತನ್ನ ಕೋಣೆಯಲ್ಲೇ ಇರಿಸಿಕೊಂಡಿದ್ದ. ಹತ್ತು ವರ್ಷಗಳಿಂದ ಇವರಿಬ್ಬರು ಒಂದೇ ಕೋಣೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಈ ವಿಚಾರ ಹುಡುಗನ ಮನೆಯವರಿಗೂ ತಿಳಿದೇ ಇರಲಿಲ್ಲ ಎಂದರೆ ನಂಬಲೇಬೇಕು. ತನ್ನ ಪ್ರೇಯಸಿಯನ್ನು ಕೋಣೆಯಲ್ಲಿಯೇ ಇರಿಸಿಕೊಂಡಿದ್ದ ಆತ ರಾತ್ರಿ ವೇಳೆ ಕಿಟಕಿ ಮೂಲಕ ಸ್ನಾನ ಹಾಗೂ ಶೌಚಕ್ಕೆ ಕರೆದುಕೊಂಡು ಹೋಗುತ್ತಿದ್ದ. ತನ್ನ ರೂಮಿಗೆ ಯಾರನ್ನೂ ಸಹ ಸೇರಿಸದೇ ಬೀಗ ಹಾಕಿಕೊಳ್ಳುತ್ತಿದ್ದ. ಅವರ ಈ ವರ್ತನೆಯನ್ನು ಪ್ರಶ್ನಿಸಿದ್ದಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಂಡವನ ಹಾಗೆ ನಟನೆ ಮಾಡುತ್ತಿದ್ದನು. ಹಾಗಾಗಿ ಮನೆಯವರು ಕೂಡ ಈತನ ಉಸಾಬರಿ ಬೇಡ ಎಂದು ಸುಮ್ಮನೆ ಇರುತ್ತಿದ್ದರು.

ಪ್ರತಿದಿನ ಕೆಲಸ ಮುಗಿಸಿ ರೂಂ ಸೇರಿದರೆ ಮುಗೀತು. ಆಕೆಯ ಜೊತೆಗೆ ಸಮಯ ಕಳೆಯುತ್ತಾ ಹೊರಗೆ ಬರುತ್ತಲೇ ಇರಲಿಲ್ಲ. ಊಟ ತಿಂಡಿ ಎಲ್ಲವನ್ನೂ ರೂಮಿನಲ್ಲಿಯೇ ತಿನ್ನುತ್ತಿದ್ದ. ತಾನು ತಂದ ಊಟವನ್ನು ಆಕೆಗೂ ಕೊಟ್ಟು ಅವನೂ ತಿನ್ನುತ್ತಿದ್ದ. ಆತನ ರೂಮಿನಿಂದ ಶಬ್ದವಾದರೂ ಆತನ ಸಹವಾಸಕ್ಕೆ ಯಾರೂ ಸಹ ಹೋಗಿರಲಿಲ್ಲ‌‌‌.

ಆದರೆ ಒಂದು ದಿನ ಇದ್ದಕ್ಕಿದ್ದ ಹಾಗೆ ಯುವಕ‌ ನಾಪತ್ತೆಯಾಗಿ ಬಿಟ್ಟ. ಹುಡುಗ ನಾಪತ್ತೆಯಾದ ನಂತರ ಮನೆಯವರು ಆತನಿಗಾಗಿ ಸಾಕಷ್ಟು ಹುಡುಕಾಡಿದರು. ಕೊನೆಗೊಂದು ದಿನ ತನ್ನ ಅಣ್ಣನ ಕಣ್ಣಿಗೆ ಬಿದ್ದನು. ಅಷ್ಟರ ವೇಳೆಗೆ ಹುಡುಗನ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಹುಡುಗ ಸಿಕ್ಕ ವಿಚಾರ ಪೊಲೀಸರಿಗೆ ತಿಳಿದ ಕೂಡಲೇ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.

ಯುವಕ ಹಾಗೂ ಯುವತಿ ಇಬ್ಬರೂ ಹತ್ತು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ರೂಮಿನಲ್ಲಿಯೇ ಅವರ ಪ್ರೀತಿ ಪ್ರೇಮ ಮುಂದುವರೆದಿತ್ತು. ರಸ್ತೆಯಲ್ಲಿ ಆಗಾಗ ಅಪ್ಪ ಅಮ್ಮನನ್ನು ಕಂಡರೂ ಅವರನ್ನು ಮಾತಾಡಿಸುವ ಗೋಜಿಗೆ ಹುಡುಗಿ ಇದ್ದು ಬಿಟ್ಟಿದ್ದಳು. ಓಡಿ ಹೋದ ನಂತರ ಇಬ್ಬರೂ ರಾತ್ರಿ ಹೊರ ಹೋಗಿ ಮದುವೆ ಮಾಡಿಕೊಂಡಿದ್ದಾರೆ. ಹತ್ತು ವರ್ಷದ ಕೆಳಗೆ ಕೈಯಲ್ಲಿ ದುಡ್ಡಿರದ ಕಾರಣ ಓಡಿ ಹೋಗಿ ಮದುವೆಯಾಗಲು ಸಾಧ್ಯವಾಗಲಿಲ್ಲ. ಹಾಗಾಗಿಯೇ ಕೋಣೆಯಲ್ಲಿಯೇ ಸಂಸಾರ ಮಾಡಿಕೊಂಡಿದ್ದರು. ಈಗ ಮದುವೆಯಾಗಿದ್ದಾರೆ. ಈ ಎಲ್ಲಾ ವಿಚಾರವನ್ನು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಹತ್ತು ವರ್ಷದ ಹುಚ್ಚು ಪ್ರೀತಿಯ ವಿಚಾರ ಕೇಳಿದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.